ಅಬ್ಬಾಸ್, ಖ್ವಾಜಾ ಅಹಮದ್
	
ಭಾರತೀಯ ಖ್ಯಾತ ಪತ್ರಿಕೋದ್ಯಮಿ, ಕಾದಂಬರಿಕಾರ, ಕಥೆಗಾರ. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ತಮ್ಮ ತೀಕ್ಷ್ಣವೂ ಸ್ಫುಟವೂ ಆದ ಬರೆಹದಿಂದ ಪ್ರಸಿದ್ಧಿಗೆ ಬಂದರು. 

1914ರಲ್ಲಿ ಪಾಣಿಪತ್‍ನಲ್ಲಿ ಜನನ. ಬಿ.ಎ. ಮತ್ತು ಎಲ್‍ಎಲ್.ಬಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಾಂಟಿ ಕ್ರಾನಿಕಲ್ ಪತ್ರಿಕೆಯನ್ನು ಸಿನಿಮಾ ವಿಮರ್ಶಕರಾಗಿ ಸೇರಿದರು. ಅವರ ವಿಮರ್ಶೆಯು ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ಸಿನಿಮಾ ನಿರ್ಮಾಪಕರು ಅವರನ್ನು ವಜಾ ಮಾಡದಿದ್ದರೆ ಪತ್ರಿಕೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದರು. ಪತ್ರಿಕೆಯ ಆಡಳಿತವು ಅವರನ್ನು ಸಂಪಾದಕೀಯ ವಿಭಾಗಕ್ಕೆ ವರ್ಗ ಮಾಡಿತು. ಇಲ್ಲಿ ಲಾಸ್ಟ್ ವೇಜ್ ಎನ್ನುವ ವಿಭಾಗವನ್ನು ಪ್ರಾರಂಭಿಸಿ ಅಸಾಧಾರಣ ಖ್ಯಾತಿಯನ್ನು ಪಡೆದರು. ಅಜಾದ್ ಕಾಮ್ ಎನ್ನುವ ಕಾವ್ಯನಾಮದಲ್ಲಿ ಅವರು ಅನೇಕ ಕವನಗಳನ್ನು ಬರೆದಿದ್ದಾರೆ. ಅವರದು ಪ್ರೇಮ ವಿವಾಹ. ಪತ್ನಿ ಮುಜ್ರಾಬಾಯ್ ಬೇಗಮ್. ದೇಶದ ವಿಭಜನೆಯಾದಾಗ ಅಬ್ಬಾಸ್ ಕುಟುಂದವರು ಬಹು ಕಷ್ಟದಿಂದ, ಯಾತನೆಯನ್ನು ಅನುಭವಿಸಿ ಭಾರತಕ್ಕೆ ಬಂದರು.
	
ನಾಳೆ ನಮ್ಮದು ( 1943) ಹಲವಾರು ಆದರ್ಶಗಳನ್ನು ಮುಂದಿಡುತ್ತದೆ. ರಾಷ್ಟ್ರೀಯತೆ, ವಾಮ ಪಂಥೀಯ ಚಿಂತನೆ, ವಿಚಾರ ಧಾರೆ ಸರ್ವ ಸಮಾನತೆ ಎಲ್ಲ ಆದರ್ಶಗಳ ಉತ್ಸಾಹದ ನಿರೂಪಣೆ ಮತ್ತು ಅಸ್ಪøಶ್ಯತೆಗಳ ಖಂಡನೆ ಇಲ್ಲಿ ಕಾಣುತ್ತದೆ. ಮುಖ್ಯ ಪಾತ್ರ ಪಾರ್ವತಿ ತನ್ನ ನೃತ್ಯ ಪ್ರತಿಭೆಯನ್ನು ಜನತಾ ರಂಗಮಂದಿರದ ಸೇವೆಗೆ ಅರ್ಪಿಸುತ್ತಾಳೆ. ಅವಳ ಗಂಡ ವೈದ್ಯ, ಯುದ್ಧದಲ್ಲಿ ಗಾಯ ಗೊಂಡವರ ಸೇವೆಗಾಗಿ ಚೀನಕ್ಕೆ ಹೋಗುತ್ತಾನೆ. 
	
ಸಾವಿಗೆ ಸೋಲು (1944), ರಕ್ತ ಮತ್ತು ಕಲ್ಲುಗಳು, ಇನ್‍ಕಿಲಾಬ್ (1949) ಮೊದಲಾದ ಕೃತಿಗಳು ಇಂಡೊ-ಆಂಗ್ಲಿಯನ್ ಸಾಹಿತ್ಯದಲ್ಲಿ ಅಬ್ಬಾಸರಿಗೆ ಗಮನಾರ್ಹ ಸ್ಥಳವನ್ನು ಗಳಿಸಿಕೊಟ್ಟಿವೆ. ಇನ್‍ಕಿಲಾಬ್ (ಕ್ರಾಂತಿ) ಐತಿಹಾಸಿಕ ಕಾದಂಬರಿ, ಸ್ವಾತಂತ್ರ್ಯಪೂರ್ವದ ಮೂವತ್ತು ವರ್ಷಗಳ ಇತಿಹಾಸ ಇದರ ವಸ್ತು. ದೇಶದ ವೈಚಾರಿಕತೆಯನ್ನೂ ಕ್ರಿಯಾಶೀಲತೆಯನ್ನೂ ರೂಪಿಸಿದ ಗಾಂಧಿ, ನೆಹರು, ರಾಜಾಜಿ, ವಲ್ಲಭಬಾಯಿ ಪಟೇಲ್, ಆಜಾದ್, ಅಬ್ದುಲ್ ಗಫಾರ್ ಖಾನ್ ಮೊದಲಾದ ನಾಯಕರು ಇಲ್ಲಿ ಕಾಣಿಸಿಕೊಳ್ಳುತ್ತಾರೆ. ರೌಲತ್ ಶಾಸನ ಮತ್ತು ಜಲಿಯನ್‍ವಾಲಾಬಾಗಿನ ಕಷ್ಟದ ಯುಗವನ್ನು ಕಾದಂಬರಿ ಚಿತ್ರಿಸಿ 1931ರ ಗಾಂಧಿ-ಇರ್ವಿನ್ ಒಪ್ಪಂದದೊಡನೆ ಮುಕ್ತಾಯವಾಗುತ್ತದೆ. ಕೃತಿಯ ನಾಯಕ ಅನ್ವರ್ ಈ ಮಹಾವ್ಯಕ್ತಿಗಳ ಪ್ರಭಾವದಲ್ಲಿ ಬೆಳೆಯುತ್ತಾನೆ. ರಾಷ್ಟ್ರೀಯ ಆಂದೋಳನದಲ್ಲಿ ಭಾಗವಹಿಸುತ್ತಾನೆ. ಈತ ಹಿಂದೂ ವರ್ತಕನೊಬ್ಬನ ಪ್ರೇಯಸಿಯ ಮಗ. ಮುಸ್ಲಿಂ ಸಾಕುತಂದೆಯ ಆಶ್ರಯದಲ್ಲಿ ಬೆಳೆದ ಎನ್ನುವುದು ಕಡೆಯಲ್ಲಿ ಬೆಳಕಿಗೆ ಬರುತ್ತದೆ. ನಾಯಕನ ವೈಯಕ್ತಿಕ ಜೀವನವನ್ನೂ ನಾಡಿನ ಜೀವನದ ಒಂದು ಎಳೆಯನ್ನಾಗಿ ಕಾಣಬೇಕು. 
	
ಇನಕಿಲಾಬ್ ಕಾದಂಬರಿಯು ರಷ್ಯನ್ ಭಾಷೆಗೆ ಅನುವಾದಾಗ ಬಹು ಜನಪ್ರಿಯವಾಯಿತು. 90,000 ಪ್ರತಿಗಳು ಮಾರಾಟವಾದವು.
	
ಕಲ್ಲಿನ ಹಾಸಿಗೆಯ ಮೇಲೆ ಒಂದು ಸಾವಿರ ರಾತ್ರಿಗಳು ಎಂಬ ಕಾದಂಬರಿ ಬೊಂಬಾಯಿಯಲ್ಲಿ ರಸ್ತೆಗಳ ಅಂಚಿನ ಕಲ್ಲುಗಳ ಮೇಲೆ ವಾಸಿಸುವವರ ಬಾಳಿನ ಕಥೆ. 
	
ಅಬ್ಬಾಸ್ ಅವರ ಅಂಡ್ ಒನ್ ಡಿಕ್ ನಾಟ್ ಕಮ್ ಬ್ಯಾಕ್ ಕಾದಂಬರಿಯನ್ನು ಆಧರಿಸಿ ಖ್ಯಾತ ನಿರ್ದೇಶಕ ವಿ. ಶಾಂತಾರಾಂ ಅವರು ಡಾ ಕೊಟ್ನೀಸ್ ಕಿ ಅಮರ್ ಕಹಾನಿ ಚಿತ್ರವನ್ನು ನಿರ್ಮಿಸಿದರು.
	
ಅಬ್ಬಾಸ್ ತಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಭಾರತದ ಇತ್ತೀಚಿನ ಇತಿಹಾಸದ ಒಂದು ಮಹತ್ತ್ವಪೂರ್ಣ ಅವಧಿಯನ್ನು ವಿವರಿಸುವ ಮತ್ತು ಕಾಲ್ಪನಿಕ ಅಂಶವನ್ನೂ ಚಾರಿತ್ರಿಕ ವಾಸ್ತವಾಂಶವನ್ನೂ ಸಮರಸಗೊಳಿಸುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಗಳಲ್ಲೂ ಲೇಖನಗಳಲ್ಲೂ ಅಬ್ಬಾಸರದು ತೀಕ್ಷ್ಣ ಶೈಲಿ. ರಾಷ್ಟ್ರೀಯತೆ ಮತ್ತು ದೀನದಲಿತರಲ್ಲಿ ಅನುಕಂಪ ಇವರ ಬರೆಹಗಳಲ್ಲಿ ಎದ್ದು ಕಾಣುತ್ತದೆ. ಬಾಂಬೆ ಕ್ರಾನಿಕಲ್, ಬ್ಲಿಟ್ಸ್ ಪತ್ರಿಕೆಗಳಿಗೆ ಇವರು ವಾರವಾರವೂ ಬರೆದ ಲೇಖನಗಳು ಬಹು ಜನಪ್ರಿಯವೆನಿಸಿವೆ. ಐ ರೈಟ್ ಆ್ಯ¸óï ಐ ಫೀಲ್ ಎಂಬ ಇವರ ಪ್ರಬಂಧಸಂಕಲನ ಪ್ರಚಲಿತ ವಿಷಯಗಳನ್ನು ಸಮರ್ಥವಾಗಿ ರೂಪಿಸಿದೆ.
	
ಅಬ್ಬಾಸ್ ಅವರಿಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಭೂಪಾಲ್ ಉರ್ದು ಅಕಾಡೆಮಿ ಪ್ರಶಸ್ತಿ, ಹರಿಯಾಣ ಸರ್ಕಾರದ ಪ್ರಶಸ್ತಿ ಷೇರ್ ಔರ್ ಸಪ್ನ ಚಲನಚಿತ್ರಕ್ಕೆ ರಾಷ್ಟ್ರಪತಿಗಳ ಪದಕ, ಪದ್ಮಶ್ರೀ ಪ್ರಶಸ್ತಿ, ಕಾರ್ಲೊವಿವೇರಿ ಫಿಲ್ಮ್ ಫೆಸ್ಟಿವೆಲ್ ನ ಆರ್ಟ್ ಅಕಾಡಮಿ ಪ್ರಶಸ್ತಿ, ಸ್ಪೇನಿನ ಘೂಮನ್ ಪ್ರಶಸ್ತಿ, ಅಮೆರಿಕದ ಸಾಂತ ಬಾರ್ಬರ ಪ್ರಶಸ್ತಿ, ಅವು ಇವರಿಗೆ ಸಂದ ಗೌರವಗಳಲ್ಲಿ ಕೆಲವು.									   
(ಎಲ್.ಎಸ್.ಎಸ್.)
					 (ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ